Friday, 14 March 2014

ಹೆಣ್ಣು ನಾನು





ಹೆಣ್ಣು ನಾನು
ಶಿವನುರಿಗಣ್ಣು ನಾನು
ಕಾಡಿಸಿ ಪೀಡಿಸಿದರೆ
ಸುಟ್ಟುಬಿಟ್ಟೇನು.

ಹೆಣ್ಣು ನಾನು
ಕಾಳಿಯ ಕೈಕಾಲು ನಾನು
ದುಷ್ಟತನದ ಮುಂಡ ಕೊಚ್ಚೇನು
ರುಂಡ ಮೆಟ್ಟೇನು.

ಹೆಣ್ಣು ನಾನು
ಹರಿಯ ಕೈಯ ಬೆರಳು ನಾನು
ಸೊಕ್ಕಿನ ಕಣ್ಣನು ಕಿವಿಚಿ ಇಕ್ಕೇನು
ಅಳಿಸಿ ನಕ್ಕೇನು.

ಹೆಣ್ಣು ನಾನು
ಅಗಸ್ತ್ಯರ ಹೊಟ್ಟೆಯ ಕರುಳು ನಾನು
ಮೋಸವಂಚನೆಗಳ
ತಿಂದು ತೇಗೇನು.

ಹೆಣ್ಣು ನಾನು
ವಶಿಷ್ಟ ಗೋತ್ರದ ಕಾಮಧೇನು
ಪ್ರೀತಿಸಿ ಪೂಜಿಸಿದರೆ
ಏನೆಲ್ಲ ಕೊಟ್ಟೇನು
ಕಲ್ಪಲತೆಯ ನೆಟ್ಟೇನು.

                                                 ನೂತನ  ಆರ್ಕುಲಕಣಿ೯.
                                                       (ನಿರ್ಭಯಾಗೆ ಅರ್ಪಣೆ)



Thursday, 13 March 2014

ರಮ್ಯಕಾಶಿ

ಹೂ, ಹಾಲು, ಹಣ್ಣು
ಬೆಲ್ಪತ್ರಿ, ಬತ್ತಾಸು
ತುಂಬಿದ ತಟ್ಟೆಗಳ
ನೂಕು ನೂಕು ನುಗ್ಗಲು !
ಇಕ್ಕಟ್ಟಿನ ಗಲ್ಲಿಗಳೊಳಗ
ಬೂಟು, ಕೋಲುಗಳ
ಖಟ ಖಟ ಜಬರ್ದಸ್ತ ಗಸ್ತು.
ವಿಶ್ವನಾಥಗ ಬಿಗಿ ಬಂದೋಬಸ್ತ್ !
"ಒಂದಾನೊಂದು ಕಾಲದಲ್ಲಿ
ರಮ್ಯವಾದ ಕಾಶೀ ಪಟ್ಟಣದಲ್ಲಿ.... "
ಅಂತ ಶುರುವಾಗೋ ಕಥೆಗಳ
ನೆನಪು, ನಿಟ್ಟುಸಿರು!
...........................
ಹಾರಿಪಾದ ನಖದಿಂದ
ಹರಿದು ಬಂದಳು :----
ಅಹಿಲ್ಯಾ , ಲಲಿತಾ, ಶೀತಲಾ,
ದರಭಂಗಾ, ಕೇದಾರ, ಮಣಿಕರ್ಣಿಕಾಗಳಿಂದ
ಸರಕೆಲ್ಲಾ ಹೇರಿಕೊಂಡಳು.
ಹರಿಷ್ಚಂದ್ರದೊಳಗ ಹಗಲಿರುಳನ್ನದ
ಸ್ವರ್ಗಕ್ಕ ರಫ್ತು ಮಾಡಿದಳು.
ಹನುಮಾನದಾಗ ಹಳೇ ಮಾಲನ್ನ
ತೊಳೆಯೋ ಕರ್ಮ ಮಾಡಿದಳು.
ಎದೀ ಹೀರಿ ಹರಿದಾಡೋ
ಹುಚ್ಚ ಮಕ್ಕಳು ಕೊಟ್ಟ ನೋವು ನುಂಗಿ
ಮುಂದ ನಡದಳು.
ಮತ್ತ ದಶಾಶ್ವಮೇಧದೊಳಗ
ಧೂಪ ದೀಪದಾರ್ತಿ
ಪ್ರೀತಿಯಿಂದ ಇಸದು ನಕ್ಕಳು.
.................................
"ಒಂದಾನೊಂದು ಕಾಲದಾಗ
ರಮ್ಯವಾದ ಕಾಶಿ ಪಟ್ಟಣದಾಗ
ಛಂದಾಗಿ ಹರಿದ ಗಂಗೆ...."
ಇಂದ್ಯಾಕೋ ಸೊರಗಿಧಾಂಗ.